ಜಲಸಸ್ಯಗಳು  - 
ಸಸ್ಯಗಳನ್ನು ಅವು ಬೆಳೆಯುವ ನೆಲೆಗಳ ಆಧಾರದ ಮೇಲೆ ಶುಷ್ಕಸಸ್ಯಗಳು (ಕ್ಸೀರೋಫೈಟ್ಸ್), ಮೀಸೋಫೈಟ್ಸ್ ಮತ್ತು ಜಲಸಸ್ಯಗಳು (ಹೈಡ್ರೊಫೈಟ್ಸ್) ಎಂಬ ಮೂರು ವರ್ಗಗಳನ್ನಾಗಿ ವಿಂಗಡಿಸಲಾಗಿದೆ. ಸುತ್ತಲ ಸನ್ನಿವೇಶವನ್ನೂ ಬೆಳೆಯುವ ಮಣ್ಣನ್ನೂ ಸಸ್ಯಗಳಿಗೂ ನೀರಿಗೂ ಇರುವ ಸಂಬಂಧವನ್ನೂ ಈ ವರ್ಗೀಕರಣದಲ್ಲಿ ಪರಿಗಣಿಸಲಾಗುತ್ತದೆ. ಅವುಗಳ ಹೆಸರೇ ಸೂಚಿಸುವಂತೆ ಜಲಸಸ್ಯಗಳು ಸಾಮಾನ್ಯವಾಗಿ ನೀರಿನಲ್ಲಿ ಬೆಳೆಯುವ ಸಸ್ಯಗಳು. ಕೆಲವು ಜೌಗು ಪ್ರದೇಶಗಳಲ್ಲೂ ಬೆಳೆಯುವುದುಂಟು. ನೆಲದ ಮೇಲಿನ ಸಸ್ಯಗಳಂತೆ ಉಷ್ಣತೆಯ ವೈಪರೀತ್ಯಗಳನ್ನು ಇವು ಸಹಿಸಲಾರವು. ಇವುಗಳ ಪರಿಸರ ನೀರು ಆಗಿರುವುದರಿಂದ ಇವಕ್ಕೆ ಕೆಲವು ವಿಶಿಷ್ಟ ಸಮಸ್ಯೆಗಳುಂಟು.

	ಗಾಳಿಯ ಪೂರೈಕೆ, ಅದರಲ್ಲೂ ಉಸಿರಾಟಕ್ಕೆ ಬೇಕಾಗುವ ಆಕ್ಸಿಜನ್ ಹಾಗೂ ದ್ಯುತಿಸಂಶ್ಲೇಷಣೆಗೆ ಬೇಕಾಗುವ ಕಾರ್ಬನ್ ಡೈ ಆಕ್ಸೈಡ್ ಅನಿಲಗಳ ಪೂರೈಕೆ, ಇವುಗಳ ಸಮಸ್ಯೆಗಳಲ್ಲೊಂದು. ವಿವಿಧ ರೀತಿಯ ಜಲಸಸ್ಯಗಳು ಈ ಸಮಸ್ಯೆಯನ್ನು ವಿವಿಧ ಬಗೆಯಲ್ಲಿ ಬಗೆಹರಿಸಿಕೊಂಡಿವೆ. ನೀರಿನಲ್ಲಿ ಆಕ್ಸಿಜನ್ ಅತ್ಯಲ್ಪ ಮೊತ್ತದಲ್ಲಿ ಕರಗಿದ್ದರೂ ಕೆಲವು ನಾಳಮಯ ಜಲಸಸ್ಯಗಳು ಇಷ್ಟನ್ನೇ ಬಳಸಿಕೊಳ್ಳಲು ಸಮರ್ಥವಾಗಿದ್ದು ಬೇರೆ ಗಿಡಗಳಂಥ ಬೇರು ಇತ್ಯಾದಿ ಅಂಗಗಳನ್ನು ಪಡೆದಿವೆ. ನಿಂತ ನೀರಿನಲ್ಲಿ ಇಲ್ಲವೆ ಜೌಗುಭೂಮಿಗಳಲ್ಲಿ ಬೆಳೆಯುವ ಹಲವು ಜಲಸಸ್ಯಗಳು ಆಕ್ಸಿಜನ್ ಇಲ್ಲದೆಯೆ ಉಸಿರಾಡಬಲ್ಲವು. ಇನ್ನು ಕೆಲವು ತಮ್ಮ ದೇಹದಲ್ಲಿ ಗಾಳಿ ಓಡಾಡಲು ಅನುಕೂಲಿಸುವಂತೆ ವಿಸ್ತಾರವಾದ ಸಂಪರ್ಕ ವ್ಯವಸ್ಥೆಯನ್ನೂ ವಾಯುಸಂಗ್ರಹಣಾ ವ್ಯವಸ್ಥೆಯನ್ನೂ ರೂಪಿಸಿಕೊಂಡಿವೆ. ಕೆಲವು ಅಂಗಾಂಶಗಳಲ್ಲಿ ಜೀವಕೋಶಗಳು ಶಿಥಿಲವಾಗುವುದರಿಂದ ಅಲ್ಲಲ್ಲಿ ವಾಯುಕುಳಿಗಳು ಕಂಡುಬರುತ್ತವೆ. ಆದರೆ ಪೋಡಾಸ್ಟಮೇಸೀ ಎಂಬ ಕುಟುಂಬಕ್ಕೆ ಸೇರಿದ ಜಲಸಸ್ಯಗಳಲ್ಲಿ ವಾಯುಕುಳಿಗಳಿಲ್ಲ. ಬಹುಶಃ ಇವು ವಿಕಾಸವಾಗುತ್ತಿರುವಾಗ ಕುಳಿಗಳನ್ನು ಕಳೆದುಕೊಂಡಿರಬಹುದು. ಹೀಗಿದ್ದರೂ ಈ ಗಿಡಗಳು ತ್ವರಿತಗತಿಯಲ್ಲಿ ಸಾಗುವ ಹಾಗೂ ಆಕ್ಸಿಜನ್ ತುಂಬಿರುವ ಪ್ರವಾಹಗಳಲ್ಲಿ ಬೆಳೆಯುವುದರಿಂದ ಅನಿಲ ವಿನಿಮಯ ಇವುಗಳಲ್ಲಿ ಸಮಸ್ಯೆ ಅಲ್ಲ. ಎಲ್ಲ ಜಲಸಸ್ಯಗಳಲ್ಲಿ ಏರೆಂಕಿಮ ಎಂಬ ಅಂಗಾಂಶ ಅಧಿಕ ಮೊತ್ತದಲ್ಲಿ ರೂಪುಗೊಂಡಿವೆ. ವಿಸ್ತಾರವಾಗಿ ಹರಡಿರುವ ಇದರ ಜೀವಕೋಶಗಳ ನಡುವೆ ಅವಕಾಶಗಳಿವೆ. ಈ ಅವಕಾಶಗಳಲ್ಲಿ ಗಾಳಿ ಶೇಖರವಾಗಿರುವುದರಿಂದ ಸಸ್ಯಗಳಿಗೆ ಪ್ಲವನಶಕ್ತಿ ದೊರೆಯುತ್ತದೆ. ಐಕಾರ್ನಿಯ ಎಂಬ ಗಿಡದ ಎಲೆಗಳ ತೊಟ್ಟುಗಳಲ್ಲಿ ಏರೆಂಕಿಮ ಅಧಿಕ ಪ್ರಮಾಣದಲ್ಲಿ ಇರುವುದರಿಂದ ತೊಟ್ಟುಗಳು ಉಬ್ಬಿಕೊಂಡಿರುತ್ತವೆ. ಇವೇ ಸಸ್ಯಗಳು ನೀರಿನಲ್ಲಿ ಬೆಳೆಯದೆ ಸ್ವಲ್ಪ ಒದ್ದೆಯಾದ ಮಣ್ಣಿನಲ್ಲಿ ಬೆಳೆದರೆ ಏರೆಂಕಿಮ ಅಂಗಾಂಶ ಇಷ್ಟು ಪ್ರಮಾಣದಲ್ಲಿರುವುದಿಲ್ಲ. ಆದ್ದರಿಂದ ಏರೆಂಕಿಮ ಅಂಗಾಂಶ ಸಸ್ಯ ನೀರಿನಲ್ಲಿ ತೇಲಾಡುವಂತೆ ಸಹಾಯ ಮಾಡುವ ರಚನೆಯೆಂದು ಖಚಿತವಾಗುತ್ತದೆ. ತಾವರೆಯ ಕಾಯಿಗಳಲ್ಲಿ ಕೂಡ ಏರೆಂಕಿಮ ಅಂಗಾಂಶ ಇದ್ದು ಫಲಪ್ರಸಾರಕ್ಕೆ ನೆರವಾಗುತ್ತದೆ. ಅeóÉೂಲ ಎಂಬ ಜಲಸಸ್ಯದಲ್ಲಿ ಎಲೆಗಳ ಮೇಲ್ಭಾಗದಲ್ಲಿ ಚಿಕ್ಕ ಚಿಕ್ಕ ಕೂದಲುಗಳು ಇವೆ. ಗಾಳಿಯನ್ನು ಹಿಡಿದಿಡಲು ಇವು ಸಹಾಯಕ. ಜಸ್ಸಿಯ ಎಂಬ ಗಿಡದಲ್ಲೂ ಏರೆಂಕಿಮ ಅಧಿಕ ಮೊತ್ತದಲ್ಲಿದೆ. ಆದರೆ ಈ ಜಾತಿಯ ಸಸ್ಯದ ಒಂದು ಪ್ರಭೇದವನ್ನು ಭೂಮಿಯ ಮೇಲೆ ಬೆಳೆಸಬಹುದು. ಇದರಲ್ಲಿ ಏರೆಂಕಿಮ ಅಂಗಾಂಶ ಇಲ್ಲವೇ ಇಲ್ಲ.

	ಸಮುದ್ರದಲ್ಲಿ ಬೆಳೆಯುವ ಫ್ಯೂಕಸ್ ಎಂಬ ಗಿಡದಲ್ಲಿ ಬ್ಲಾಡರ್‍ಗಳೆಂಬ ರಚನೆಗಳಿವೆ. ಸಸ್ಯ ನೀರಿನಲ್ಲಿ ನೇರವಾಗಿ ನಿಲ್ಲಲು ಇವು ಸಹಾಯಕವಾಗಿವೆ. ವಾಟರ್ ಲಿಲಿ ಗಿಡದಲ್ಲಿ ಸಸ್ಯದ ಸ್ವಲ್ಪ ಭಾಗ ನೀರಿನಲ್ಲಿ ಮುಳುಗಿ ಇನ್ನುಳಿದ ಭಾಗ ನೀರಿನಿಂದ ಹೊರಗಿದ್ದು ವಾಯುವಿನ ಸಂಪರ್ಕ ಪಡೆದಿರುವುದರಿಂದ ಸಸ್ಯದೇಹದಾದ್ಯಂತ ಆವಿಚ್ಛಿನ್ನವಾಗಿ ವಾಯುವನ್ನು ಒಯ್ಯುವ ವ್ಯವಸ್ಥೆ ಉಂಟು. ಇನ್ನು ಕೆಲವು ಜಲಸಸ್ಯಗಳಾದ ಟ್ರಾಪ, ಪಿಸ್ಟಿಯ, ಹೈಡ್ರೋಕ್ಯಾರಿಸ್ ಮೊದಲಾದವುಗಳಲ್ಲಿ ಏರೆಂಕಿಮ ಅಂಗಾಂಶ ಎಷ್ಟರಮಟ್ಟಿಗೆ ವೃದ್ಧಿಯಾಗಿದೆಯೆಂದರೆ ಇವು ಈಜುಬುರುಡೆಗಳಂತೆ ದಪ್ಪವಾಗಿ ಊದಿಕೊಂಡಿದ್ದು ಮುಟ್ಟಿದರೆ ಸ್ಪಂಜಿನಂತಿವೆ.

	ಕೆಲವು ಜಲಸಸ್ಯಗಳಲ್ಲಿ ಏರೆಂಕಿಮ ಅಂಗಾಂಶ ಅಲ್ಪ ಮೊತ್ತದಲ್ಲಿರುವುದರಿಂದ ಇದನ್ನು ಸಮತೂಗಿಸಲು ತೆಳುವಾದ ಕೋಶಭಿತ್ತಿಗಳಿಂದ ರಚಿತವಾದ ವಪೆಗಳೆಂಬ ರಚನೆಗಳಿವೆ (ಉದಾ: ಪಾಂಟಿಡೇರಿಯ, ಪೊಟಮೊಜೆಟಾನ್, ಸ್ಯಾಜಿಟೇರಿಯ). ಇವು ವಾಯುಕುಳಿಗಳನ್ನು ಛೇದಿಸಿ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುತ್ತವೆ. ವಪೆಗಳು ಸಾಮಾನ್ಯವಾಗಿ ನೀರಿನಲ್ಲಿ ಮುಳುಗಿರುವ ಸಸ್ಯಭಾಗದ ಗಿಣ್ಣುಗಳಲ್ಲಿ ಹಾಗೂ ಎಲೆಗಳ ತೊಟ್ಟುಗಳಲ್ಲೂ ಇತರ ಜಲವಾಸಿ ಏಕದಳ ಸಸ್ಯಗಳಲ್ಲೂ ನೋಡಬಹುದು.

	ಜಲಸಸ್ಯಗಳು ನಿರಂತರವಾಗಿ ನೀರಿನ ಸಂಪರ್ಕದಲ್ಲಿರುವುದರಿಂದ ನೀರನ್ನು ಹೀರುವ ಅಂಗಗಳಾದ ಬೇರುಗಳು ಚೆನ್ನಾಗಿ ರೂಪುಗೊಂಡಿಲ್ಲ. ಬೇರು ಸಾಮಾನ್ಯವಾಗಿ ಚಿಕ್ಕವಾಗಿದ್ದು ಅಲ್ಪಪ್ರಮಾಣದಲ್ಲಿ ಕವಲೊಡೆದಿರುತ್ತವೆ. ಕೆಲವು ವೇಳೆ ಇರುವುದೇ ಇಲ್ಲ. ಸೆರಟೊಫಿಲಂ ಎಂಬ ಸಸ್ಯದಲ್ಲಿ ಬೇರು ರೋಮಗಳು ಸಂಪೂರ್ಣವಾಗಿ ನಶಿಸಿಹೋಗಿವೆ. ಜಸ್ಸಿಯದಲ್ಲಿ ಸಾಮಾನ್ಯವಾಗಿ ಬೆಳೆಯುವ ಬೇರುಗಳಲ್ಲದೆ ಗಿಣ್ಣುಗಳಿಂದ ಸ್ಪಂಜಿನಂಥ ಬೇರುಗಳು ಮೇಲ್ಮಖವಾಗಿ ಬೆಳೆಯುವುದನ್ನು ಕಾಣಬಹುದು. ಜಲಸಸ್ಯಗಳಲ್ಲಿ ದೇಹದ ಒಂದಿಲ್ಲೊಂದು ಭಾಗದಲ್ಲಿ ಕಾಣಬರುವ ವಾಯುಕುಳಿಗಳ ರೂಪುಗೊಳ್ಳುವಿಕೆ ಅನುವಂಶಿಕ ನಿಯಂತ್ರಣಕ್ಕೊಳಗಾಗಿದೆ ಎಂದು ಭಾವಿಸಲಾಗಿದೆ. ವಾಯುಕುಳಿಗಳು ನಿರ್ದಿಷ್ಟ ಸಂಖ್ಯೆಯಲ್ಲಿರುವುದರಿಂದ ಈ ಗುಣವನ್ನು ಒಂದೇ ಜಾತಿಯ ಸಸ್ಯಗಳ ಪ್ರಭೇದಗಳನ್ನು ಗುರುತಿಸಲು ಬಳಸಿಕೊಳ್ಳಲಾಗಿದೆ.

	ಸೈಪರಸ್, ಟೈಫ ಮೊದಲಾದ ಸಸ್ಯಗಳಲ್ಲಿ ನಿರ್ದಿಷ್ಟ ಋತುಗಳಲ್ಲಿ ಪ್ರಕಂದಗಳು ವಿಶಾಲವಾಗಿ ಹರಡಿಕೊಂಡು ಬೆಳೆಯುತ್ತವೆ. ವ್ಯಾಲಿಸ್ನೇರಿಯ, ಐಸೋಯಿಟೇಸ್ ಮತ್ತು ಅಪೊನೊಜೆಟಾನ್‍ಗಳಲ್ಲಿ ಬೇರಿನ ಬುಡ ದಪ್ಪವಾಗಿದೆ. ಐಕಾರ್ನಿಯ, ಪಿಸ್ಟಿಯ ಮೊದಲಾದ ತೇಲುವ ಜಲಸಸ್ಯಗಳಲ್ಲಿ ತಂತು ಬೇರುಗಳು ವಿಪುಲವಾಗಿ ಬೆಳೆದಿವೆ. ಗಿಡಗಳು ಭೂಮಿಯಲ್ಲಿ ಗಟ್ಟಿಯಾಗಿ ನಿಲ್ಲಲು ಇವು ಉಪಯೋಗವಾಗದಿದ್ದರೂ ಮೇಲ್ಭಾಗದಲ್ಲಿ ಗುಂಪಾಗಿ ಬೆಳೆದಿರುವ ಎಲೆಗಳಿಗೆ ಸ್ಥಿತಿ ಸ್ಥಾಪಕತೆಯನ್ನು ಕೊಡುತ್ತವೆ. ಈ ಬೇರುಗಳ ಎಪಿಡರ್ಮಿಸಿನಲ್ಲಿ ಕೆಲವೊಮ್ಮೆ ಕ್ಲೋರೋಫಿಲ್ ಇರುವುದರಿಂದ ಅಲ್ಪ ಮೊತ್ತದಲ್ಲಿ ಆಹಾರವೂ ತಯಾರಾಗುತ್ತದೆ. ಸೆರಟಾಪ್ಪರಿಸ್ ಗಿಡದಲ್ಲಿ ಬೇರುಗಳು ಬಹುವಾಗಿ ಕವಲೊಡೆದಿವೆ. ಮತ್ತೆ ಕೆಲವು ಜಲಸಸ್ಯಗಳಲ್ಲಿ ಬೇರುರೋಮಗಳು ಸಮೃದ್ಧವಾಗಿ ಬೆಳೆದಿರುವುದುಂಟು.

	ಜಲಸಸ್ಯಗಳಲ್ಲಿ ನೀರನ್ನು ಸಸ್ಯದ ಬೇರೆ ಬೇರೆ ಭಾಗಗಳಿಗೆ ಒಯ್ಯುವ ಅಂಗಾಂಶಗಳಾದ ಕ್ಸೈಲಮ್ ನಾಳಗಳು ಸಮರ್ಪಕವಾಗಿ ಬೆಳೆದಿರುವುದಿಲ್ಲ. ಕೆಲವು ಜಲಸಸ್ಯಗಳನ್ನುಳಿದು ಇತರ ಸಸ್ಯಗಳ ಬೇರಿನಲ್ಲಿ ನೀರನ್ನು ಸಾಗಿಸುವ ಎಂಡೋಡರ್ಮಿಸ್ ಮತ್ತು ಕ್ಯಾಸ್ಪೇರಿಯನ್ ಪಟ್ಟಿಗಳು ತಕ್ಕಮಟ್ಟಿಗೆ ಬೆಳೆದಿವೆ. ಕೆಲವು ನಾಳೀಯ ಜಲಸಸ್ಯಗಳಲ್ಲಿ ಬೇರು ಟೋಪಿಯ ಬದಲಾಗಿ ಬೇರು ಕವಚ ಉಂಟು. ಬೇರಿನ ಜೀವಕೋಶಗಳ ಕೋಶಭಿತ್ತಿ ತೆಳುವಾಗಿದೆ. ಅಲ್ಲದೆ ಈ ಸಸ್ಯಗಳ ಎಪಿಡರ್ಮೀಸಿನಲ್ಲಿ ಕ್ಯೂಟಿಕಲ್‍ನ ಲೇಪನವಿರುವುದಿಲ್ಲ.

	ನೀರಿನಲ್ಲಿ ಮುಳುಗಿರುವ ಸಸ್ಯಭಾಗಗಳಲ್ಲಿ ಬಾಷ್ಪವಿಸರ್ಜನೆಯ ಸಮಸ್ಯೆಯೇ ಇಲ್ಲವಾದ್ದರಿಂದ ಸ್ಟೋಮರಂಧ್ರಗಳಿರುವುದಿಲ್ಲ. ಇದ್ದರೂ ಇವು ನಿಷ್ಪ್ರಯೋಜಕವಾಗಿವೆ. ತೇಲುವ ಜಲಸಸ್ಯಗಳಲ್ಲಿ ಮತ್ತು ತೇಲಾಡುವ ಎಲೆಗಳುಳ್ಳ ಜಲಸಸ್ಯಗಳಲ್ಲಿ ಮಾತ್ರ ಎಲೆಗಳ ಮೇಲ್ಭಾಗದಲ್ಲಿ ಸ್ಟೋಮಗಳುಂಟು. ಇವು ಸಹ ಬಹುತೇಕ ಅನುಪಯುಕ್ತವೇ. ನೀರಿನ ಮೇಲೆ ಹರಡಿಕೊಂಡಿರುವ ತಟ್ಟೆಯಾಕಾರದ ಎಲೆಗಳ ಮೇಲ್ಭಾಗದಲ್ಲಿ ಮೇಣದಂಥ ಲೇಪವಿರುವುದರಿಂದ ಬಾಷ್ಪವಿಸರ್ಜನೆ ಕುಂಠಿತಗೊಂಡಿದೆ. ಎಲೆಗಳ ಮೇಲೆ ನೀರಿನ ಹನಿ ಬಿದ್ದರೂ ಜಾರಿಹೋಗುತ್ತದೆ. ಸಾಲ್ವೀನಿಯದ ಎಲೆಗಳ ಮೇಲೆ ಒತ್ತಾದ ರೋಮಗಳಿರುವುದರಿಂದ ಬಾಷ್ಪವಿಸರ್ಜನೆಗೆ ಅವಕಾಶವೇ ಇಲ್ಲ. ಅಲ್ಲದೆ ಕೆಲವು ಜಲಸಸ್ಯಗಳ ಎಲೆಗಳು ಚರ್ಮದಂತೆ ಒರಟಾಗಿರುವುದುಂಟು. ನೀರಿನಿಂದ ಮೇಲಕ್ಕೆ ಚಾಚಿರುವ ಸಸ್ಯಭಾಗಗಳಲ್ಲಿ ಲೋಳೆಯಂಥ ಪದಾರ್ಥವಿರುವುದು ಇದೇ ಉದ್ದೇಶಕ್ಕಾಗಿ. ಬೇರು ಮತ್ತು ಕಾಂಡಗಳಲ್ಲಿ ಅನುಷಂಗಿಕ ಬೆಳವಣಿಗೆ ಇಲ್ಲದಿರುವುದು ಜಲಸಸ್ಯಗಳ ಇನ್ನೊಂದು ವೈಶಿಷ್ಟ್ಯ. ಏರೆಂಕಿಮ ಅಂಗಾಂಶ ಮತ್ತು ವಪೆಗಳು ಹೆಚ್ಚಾಗಿ ಇರುವುದರಿಂದ ಆಧಾರ ಅಂಗಾಂಶಗಳು ಅತ್ಯಲ್ಪ ಮೊತ್ತದಲ್ಲಿ ರೂಪುಗೊಂಡಿವೆ.

	ಹೆಚ್ಚು ಆಳವಿಲ್ಲದ ನೀರಿನಲ್ಲಿ ಬೆಳೆಯುವ ಜಲಸಸ್ಯಗಳ ಎಲೆಗಳಲ್ಲಿ ದ್ವಿರೂಪತೆ ಕಂಡುಬರುತ್ತದೆ. ಅಂದರೆ ನೀರಿನಲ್ಲಿ ಮುಳುಗಿರುವ ಎಲೆಗಳು ನೀರಿನ ಮೇಲೆ ಬೆಳೆಯುವ ಎಲೆಗಳಿಂಗಿಂತ ಭಿನ್ನವಾಗಿರುತ್ತವೆ. ಲಿಮ್ನೊಫಿಲ ಹೆಟರೋಫಿಲ್ಲ, ಸ್ಯಾಜಿಟೇರಿಯ ಮೊದಲಾದ ಸಸ್ಯಗಳಲ್ಲಿ ಈ ರೀತಿಯ ಎಲೆಗಳನ್ನು ಕಾಣಬಹುದು. ನೀರಿನಲ್ಲಿ ಮುಳುಗಿರುವ ಎಲೆಗಳು ಅತಿ ಸೂಕ್ಷ್ಮವಾಗಿ ವಿಚ್ಛೇದಿಸಲ್ಪಟ್ಟಿದ್ದು ನೀರಿನ ಮೇಲ್ಭಾಗದ ಎಲೆಗಳು ಅಖಂಡವಾಗಿರುತ್ತವೆ. ಈ ಲಕ್ಷಣಕ್ಕೆ ಅಸಮಪತ್ರ ರೂಪತೆ (ಹೆಟರೊಫಿಲಿ) ಎಂದು ಹೆಸರು. ಇದು ಸುತ್ತಲ ಪರಿಸರ, ವಾತಾವರಣದ ಉಷ್ಣತೆ ಮತ್ತು ಆದ್ರ್ರತೆಗಳನ್ನು ಅವಲಂಬಿಸಿರುತ್ತದೆ.

	ಕೆಲವು ಜಲಸಸ್ಯಗಳಲ್ಲಿ ಪ್ರಾರಂಭದಲ್ಲಿ ಮೂಡುವ ಎಲೆಗಳು ನಂತರ ಹುಟ್ಟುವ ಎಲೆಗಳಿಗಿಂತ ತೀರ ಭಿನ್ನವಾಗಿರುತ್ತವೆ. ಇದರಲ್ಲಿ ಸುತ್ತಲ ಪರಿಸರ ಯಾವ ಪರಿಣಾಮವನ್ನೂ ಬೀರುವುದಿಲ್ಲ. ಈ ಗುಣಕ್ಕೆ ಹೆಟಿರೊಬ್ಲಾಸ್ಟಿಕ್ ಎಂದು ಹೆಸರು. ಉದಾಹರಣೆಗಾಗಿ ಸ್ಯಾಜಿಟೇರಿಯ ಸ್ಯಾಜಿಟಿಫೋಲಿಯ ಪ್ರಭೇದದಲ್ಲಿ ಆರಂಭದ ಎಳಸಾದ ಎಲೆಗಳು ಛಿದ್ರವಾಗಿ ಇಲ್ಲವೇ ನೀಳವಾಗಿದ್ದು ನೀರಿನಲ್ಲಿ ಮುಳುಗಿರುತ್ತವೆ. ಆದರೆ ಅನಂತರ ಹುಟ್ಟಿದ ಎಲೆಗಳು ನೀರಿನ ಮೇಲ್ಮೈ ಮೇಲೆ ತೇಲಾಡುವುವು ಇಲ್ಲವೆ ನೀರಿನಿಂದ ಮೇಲಕ್ಕೆ ಚಾಚಿ ಬೆಳೆಯುವುವು. ನೀರಿನಲ್ಲಿ ಮುಳುಗಿರುವ ಕಿರಿದಾದ ಛಿದ್ರವಾಗಿರುವ ಎಲೆಗಳು ನೀರಿನ ಪ್ರವಾಹವನ್ನು ಸಮರ್ಥವಾಗಿ ಎದುರಿಸಬಲ್ಲವು. ಅಖಂಡವಾದ ಹಾಗೂ ಅಗಲವಾದ ಎಲೆಗಳಿದ್ದರೆ ನೀರಿನ ಸೆಳೆತ ಮತ್ತು ಒತ್ತೆಗಳಿಗೆ ಗುರಿಯಾಗಿ ಇಡೀ ಸಸ್ಯವೇ ಅಪಾಯಕ್ಕೊಳಗಾಗುತ್ತಿತ್ತು. ಇದೇ ರೀತಿಯ ಕಾರಣಕ್ಕಾಗಿ ಐಕಾರ್ನಿಯದ ಎಲೆಗಳ ಅಂಚುಗಳಲ್ಲಿ ಆಧಾರ ಅಂಗಾಂಶಗಳುಂಟು. ತಾವರೆ ಗಿಡದಲ್ಲಿ ಎಲೆಗಳು ನೀರಿನ ಮೇಲೆ ತೇಲುವಂತೆ ಮಾಡಲು ಅವುಗಳ ತೊಟ್ಟುಗಳು ಬಹಳ ಉದ್ದ ಇವೆ.

  	ನೀರಿನಲ್ಲಿ ತೇಲಾಡುವ ಜಲಸಸ್ಯಗಳಲ್ಲಿ ವಂಶಾಭಿವೃದ್ಧಿ ಅಲಿಂಗ ಸಂತಾನೋತ್ಪತ್ತಿಯ ವಿಧಾನದಿಂದ ನಡೆಯುತ್ತದೆ. ಇವು ಹೂ ಬಿಡುವುದು ಕಡಿಮೆ. ಹೂ ಬಿಟ್ಟರೂ ಪರಾಗಸ್ಪರ್ಶ ಮತ್ತು ಗರ್ಭಧಾರಣೆಗಳು ನೀರಿನ ಮೇಲ್ಭಾಗದಲ್ಲೇ ನಡೆಯುತ್ತವೆ. ಅಲಿಂಗ ಪುನರುತ್ಪತ್ತಿಯ ಸಮಯದಲ್ಲಿ ಪ್ರತಿಯೊಂದು ಸಸ್ಯವು ಚಿಕ್ಕ ಚಿಕ್ಕ ತುಂಡುಗಳಾಗಿ ಬೇರ್ಪಡುತ್ತದೆ. ಅನಂತರ ಪ್ರತಿಯೊಂದು ತುಂಡೂ ಸ್ವತಂತ್ರ ಸಸ್ಯವಾಗಿ ಬೆಳೆಯುತ್ತದೆ. ಹೈಡ್ರೋಕ್ಯಾರಿಸ್, ಮೀರಿಯೋಫಿಲ್ಲಂ ಮತ್ತು ಯುಟ್ರಿಕ್ಯುಲೇರಿಯ ಗಿಡಗಳಲ್ಲಿ ವಿಶಿಷ್ಟ ರೀತಿಯ ಚಿಕ್ಕ ರೆಂಬೆಗಳು ಬೆಳೆಯುತ್ತವೆ. ಇಲೋಡಿಯ ಕ್ಯಾನಡೆನ್ಸಿಸ್ ಮತ್ತು ಬಜೆ ಗಿಡಗಳಲ್ಲಿ ಅಲಿಂಗ ಸಂತಾನೋತ್ಪತ್ತಿಯೇ ವಂಶಾಭಿವೃದ್ಧಿಯ ಏಕಮಾತ್ರ ವಿಧಾನ.

	ಅಪೊನೊಜೆಟಾನ್ ಮತ್ತು ಅಲಿಸ್ಮೇಸೀ ಕುಟುಂಬದ ಸಸ್ಯಗಳಲ್ಲಿ ಮಿಥ್ಯಾ ವೈವಿಪರಿ ಕಂಡುಬರುತ್ತದೆ. ಇವುಗಳ ಹೂಗೊಂಚಲಿನಲ್ಲಿ ಹೂಗಳ ಬದಲಾಗಿ ಪತ್ರ ಕಂದಗಳು (ಬಲ್ಬಿಲ್ಸ್) ಎಂಬ ರಚನೆಗಳು ಉತ್ಪತ್ತಿಯಾಗುತ್ತವೆ. ಅಮೆರಿಕದ ಕೆಲವು ಐಕಾರ್ನಿಯ ಗಿಡಗಳ ಹೂಗೊಂಚಲಿನಲ್ಲಿ ಹೂಗಳ ಸ್ಥಾನದಲ್ಲಿ ಚಿಕ್ಕ ಚಿಕ್ಕ ಗಿಡಗಳು ರೂಪುಗೊಳ್ಳುತ್ತವೆ. ಕಾಲಾನಂತರದಲ್ಲಿ ಇವು ಗಿಡಗಳಿಂದ ಬೇರ್ಪಟ್ಟು ಸ್ವತಂತ್ರ ಗಿಡಗಳಾಗಿ ಬೆಳೆಯುತ್ತವೆ. ಹಲವು ಜಲಸಸ್ಯಗಳ ಎಲೆಗಳಲ್ಲಿ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ವರ್ಧನ ಅಂಗಾಂಶದ ಚಟುವಟಿಕೆಯಿಂದ ಜೆಮ ಎಂಬ ವಿಶೇಷ ರೀತಿಯ ಮೊಗ್ಗುಗಳು ರೂಪುಗೊಳ್ಳುತ್ತವೆ. ಇವು ಕೂಡ ಗಿಡಗಳಿಂದ ಬೆರೆಯಾಗಿ ಸ್ವತಂತ್ರ ಸಸ್ಯಗಳಾಗಿ ಬೆಳೆಯತೊಡಗುತ್ತವೆ.

	ಜಲಸಸ್ಯಗಳು ಸಾಮಾನ್ಯವಾಗಿ ಬಹುವಾರ್ಷಿಕ ಬಗೆಯವು. ಇವುಗಳಲ್ಲಿ ದ್ಯುತಿ ಸಂಶ್ಲೇಷನೆ ಕ್ರಿಯೆ ಸರಾಗವಾಗಿ ನಡೆಯುವುದರಿಂದ ಗಿಡಗಳು ಸೊಂಪಾಗಿ ಬೆಳೆಯುತ್ತವೆ. ಕೆಲವು ಜಲಸಸ್ಯಗಳಲ್ಲಿ ಪ್ರಕಂದ (ರೈeóÉೂೀಮ್) ಭೂಸ್ತಾರಿ (ರನರ್), ವಿರೋಹಕ (ಸ್ಟೋಲಾನ್) ಮತ್ತು ಆಕಂದಗಳು (ಟ್ಯೂಬರ್ಸ್) ರೂಪುಗೊಂಡು ಆಹಾರವಸ್ತುಗಳನ್ನು ಶೇಖರಿಸುವುದರಿಂದ ಪ್ರತಿಕೂಲ ಸಂದರ್ಭಗಳಲ್ಲಿ ಉಪಯೋಗವಾಗುತ್ತವೆ.

	ಐಕಾರ್ನಿಯದಲ್ಲಿ ಹೂಬಿಡುವುದು ಪ್ರಕಾಶಾವಧಿ ಪ್ರಭಾವ ಮತ್ತು ಉಷ್ಣತಾ ಪ್ರಭಾವಗಳನ್ನು ಅವಲಂಬಿಸಿದೆ. ಲೆಮ್ನ ಜಾತಿಯ ಸಸ್ಯಗಳ ಪ್ರಭೇದಗಳಲ್ಲಿ ಕೆಲವಕ್ಕೆ ಕಡಿಮೆ ಸೂರ್ಯನ ಬೆಳಕು ಸಾಕಾದರೆ ಇನ್ನು ಕೆಲವಕ್ಕೆ ಹೆಚ್ಚು ಬೆಳಕು ಬೇಕಾಗುತ್ತದೆ. ಅಲ್ಲದೆ ಹೂಬಿಡುವಿಕೆಯ ಮೆಲೆ ಕಾರ್ಬನ್ ಡೈ ಆಕ್ಸೈಡ್ ಮತ್ತು ಪೋಷಕ ಆಹಾರಗಳ ಪೂರೈಕೆಗಳೂ ಪರಿಣಾಮ ಬೀರುತ್ತವೆ. ವ್ಯಾಲಿಸ್ನೇರಿಯದಲ್ಲಿ ಪರಾಗಸ್ಪರ್ಶವಾಗುವ ಸಂದರ್ಭಗಳಲ್ಲಿ ಗಂಡುಹೂಗಳು ಹೂಗೊಂಚಲಿನಿಂದ ಬೇರ್ಪಟ್ಟು ನೀರಿನ ಮೇಲಕ್ಕೆ ಬಂದು ತೇಲತೊಡಗುತ್ತವೆ. ಹೆಣ್ಣು ಹೂಗಳ ತೊಟ್ಟುಗಳು ಮಾತ್ರ ನೀಳವಾಗಿ ಬೆಳೆದು ಹೂಗಳನ್ನು ನೀರಿನ ಮೇಲ್ಮೈಗೆ ತರುತ್ತವೆ. ನೀರಿನ ಮೇಲೆ ತೇಲುತ್ತ ಸಾಗುತ್ತಿರುವ ಗಂಡು ಹೂಗಳು ಹೆಣ್ಣು ಹೂಗಳನ್ನು ಸಮೀಪಿಸುವುದುಂಟು. ಆಗ ಪರಾಗರೇಣುಗಳು ಹೆಣ್ಣು ಹೂಗಳ ಶಲಾಕಾಗ್ರದ ಮೇಲೆ ಬಿದ್ದು ಪರಾಗಸ್ಪರ್ಶ ಕ್ರಿಯೆ ನಡೆಯುತ್ತದೆ. ನಿಷೇಚನವಾದ ಅನಂತರ ಹೆಣ್ಣು ಹೂಗಳ ತೊಟ್ಟು ಸುರುಳಿ ಸುತ್ತುವುದರಿಂದ ಹೂ ನೀರಿನೊಳಕ್ಕೆ ಪುನಃ ಮುಳುಗುತ್ತದೆ. ಆದರೆ ಈಮಿರಿಯೋಫಿಲಂ ಗಿಡದಲ್ಲಿ ಪುಷ್ಪಗುಚ್ಛಗಳು ಸದಾ ನೀರಿನ ಮೇಲ್ಭಾಗದಲ್ಲಿರುವುದರಿಂದ ಪರಾಗಸ್ಪರ್ಶ ಗಾಳಿಯ ಮೂಲಕ ನಡೆಯುತ್ತದೆ.

	ಜಲಸಸ್ಯಗಳಲ್ಲಿ ಫಲ ಮತ್ತು ಬೀಜಗಳ ಪ್ರಸಾರ ನೀರಿನ ಸಹಾಯದಿಂದ ನಡೆಯುತ್ತದೆ. ನೀರಿನ ಪ್ರವಾಹದಲ್ಲಿ ಸಸ್ಯಗಳ ಸ್ಪೋರುಗಳು ಮಾತ್ರವಲ್ಲದೆ ತೆಂಗು ಮೊದಲಾದವುಗಳ ಫಲಗಳೂ ಕೊಚ್ಚಿಕೊಂಡು ಬೇರೊಂದು ಪ್ರದೇಶಕ್ಕೆ ಸಾಗಿಸಲ್ಪಡುತ್ತವೆ. ಲೆಮ್ನ, ಸಾಲ್ವೀನಿಯ ಮೊದಲಾದವುಗಳಲ್ಲಿ ಇಡೀ ಸಸ್ಯಗಳೇ ಹರಿಯುವ ನೀರಿನೊಂದಿಗೆ ಒಯ್ಯಲ್ಪಡುತ್ತವೆ. ಹೂಬಿಡುವ ನಾಳೀಯ ಜಲಸಸ್ಯಗಳ ಪೈಕಿ ಬಹುಪಾಲು ಸಸ್ಯಗಳಲ್ಲಿ ಬೀಜಗಳು ಸುಪ್ತಾವಸ್ಥೆಯಲ್ಲಿರಬಲ್ಲವು. ಇವುಗಳಲ್ಲಿನ ಭ್ರೂಣ ಬಲಿಷ್ಠವಾದ ಅಂಗಾಂಶಗಳ ಬಂಧನದಲ್ಲಿರುವುದರಿಂದ ಇವು ನಾಲ್ಕೈದು ವರ್ಷಗಳ ಅನಂತರವೂ ಮೊಳೆಯಬಲ್ಲವು. ವಾಯುಮಂಡಲದ ಉಷ್ಣಾಂಶ ಮತ್ತು ಆದ್ರ್ರತೆಗಳು ಯಾವ ಪರಿಣಾಮವನ್ನೂ ಮಾಡಲಾರವು.

	ಜಲಸಸ್ಯಗಳ ವರ್ಗೀಕರಣ : ಆರ್ಬರ್ ಎಂಬಾಕೆ ಹೂಬಿಡುವ ಜಲಸಸ್ಯಗಳನ್ನು ಮುಖ್ಯವಾಗಿ ಬೇರು ಇದೆ ಅಥವಾ ಇಲ್ಲ ಎಂಬ ಆಧಾರದ ಮೇಲೆ ಎರಡು ವರ್ಗಗಳನ್ನಾಗಿ ವಿಂಗಡಿಸಿದ್ದಾರೆ. ಈ ವರ್ಗಗಳನ್ನು ಎಲೆ ಮತ್ತು ಹೂ ಗೊಂಚಲಿನ ಮಾದರಿ, ನೀರಿನ ಮಟ್ಟಕ್ಕನುಸಾರವಾಗಿ ಅವುಗಳ ಸ್ಥಾನ ಮುಂತಾದ ಗುಣಗಳ ಆಧಾರದ ಮೇಲೆ ಉಪವರ್ಗಗಳಾಗಿ ಪುನಃ ವಿಭಾಗಿಸಿದ್ದಾರೆ. ಹೆಜ್ನಿ ಎಂಬವನ ಪ್ರಕಾರ ಜಲಸಸ್ಯಗಳಲ್ಲಿ 3 ಗುಂಪುಗಳಿವೆ : 

	1. ಯೂಹೈಡ್ರಟೋಫೈಟ್ಸ್ : ಇದರಲ್ಲಿ ಎಲೆಗಳುಳ್ಳ ಭಾಗಗಳು ನೀರಿನಲ್ಲಿ ಪೂರ್ತಿಯಾಗಿ ಮುಳುಗಿವೆ. ಆದರೆ ಹೂಬಿಡುವ ಭಾಗಗಳು ನೀರಿನಲ್ಲಿ ಮುಳುಗಿರಬಹುದು. ಅಥವಾ ನೀರಿನ ಮೇಲ್ಭಾಗದಲ್ಲಿರಬಹುದು. 2 ಹೈಡ್ರಟೋ ಏರೋಫೈಟ್ಸ್ : ಈ ಗುಂಪಿನ ಸಸ್ಯಗಳಲ್ಲಿ ಹೂಗೊಂಚಲಿನ ಭಾಗಗಳು. ಸಂಪೂರ್ಣವಾಗಿ ನೀರಿನ ಮೇಲಿರುತ್ತವೆ. ಇನ್ನುಳಿದ ಅಂಗಗಳು ಅರ್ಧಭಾಗ ನೀರಿನ ಕೆಳಕ್ಕೂ ಇನ್ನರ್ಧಭಾಗ ನೀರಿನ ಮೇಲಕ್ಕೂ ಇರುತ್ತದೆ. 3 ಟೆನಗೋಫೈಟ್ಸ್ : ಇವು ಜಲ, ನೆಲ ಎರಡರ ಮೇಲೂ ವಾಸಿಸಬಲ್ಲವಾದ್ದರಿಂದ ನೀರಿನ ಮಟ್ಟದಲ್ಲಿ ವ್ಯತ್ಯಾಸವಾದರೂ ಬದುಕಬಲ್ಲವು. ಲೂತರ್ ಎಂಬಾತ ಕೊಳ ಕೆರೆಗಳ ತಳದಲ್ಲಿ ಬೇರೂರಿರುವ ಜಲಸಸ್ಯಗಳನ್ನು ರೈeóÉೂೀಫೈಟ್ಸ್ ಎಂದೂ ನಿರ್ಬಂಧಿತವಾಗಿ ತೇಲಾಡುವ ಸಸ್ಯಗಳನ್ನು ಪ್ಲೇನೋಫೈಟ್ಸ್ ಎಂದೂ ಕರೆದರು. ಬ್ರಿಟನ್ನಿನ ಪರಿಸರ ಶಾಸ್ತ್ರಜ್ಞನಾದ ಟ್ಯಾನ್‍ಸ್ಲೀ, ಸ್ಟೆನ್ಸ್ ಮೊದಲಾದವರು ಅವುಗಳ ಜೀವನ ಮತ್ತು ಬೆಳವಣಿಗೆಯ ಕ್ರಮವನ್ನನುಸರಿಸಿ ಜಲಸಸ್ಯಗಳನ್ನು ಈ ರೀತಿಯಾಗಿ ವಿಂಗಡಿಸಿರುವರು : (ಅ) ಕೆರೆಕೊಳಗಳ ತಳಭಾಗದಲ್ಲಿ ಬೇರೂರಿರುವ ಜಲಸಸ್ಯಗಳು : ಇವುಗಳಲ್ಲಿ ಮೂರು ವಿಧ : 1. ನೀರಿನಿಂದ ಹೊರಕ್ಕೆ ಬಂದಿರುವ ಜಲಸಸ್ಯಗಳು, 2. ನೀರಿನಲ್ಲಿ ತೇಲಾಡುವ ಸಸ್ಯಗಳು, 3 ಸಂಪೂರ್ಣವಾಗಿ ಮುಳುಗಿರುವ ಸಸ್ಯಗಳು. ಇವುಗಳಲ್ಲಿ ಕಾಂಡದ ತಳಭಾಗ ಪ್ರಕಂದ ಮತ್ತು ಇನ್ನಿತರ ಗೆಡ್ಡೆಗಳ ರೂಪದಲ್ಲಿದೆ.

	(ಆ) ಸ್ವತಂತ್ರವಾಗಿ ತೇಲಾಡುವ ಜಲಸಸ್ಯಗಳು : ಇವು ಮಂದಗತಿಯಲ್ಲಿ ಹರಿಯುವ ನೀರಿನಲ್ಲಿ ಬೆಳೆಯುತ್ತವೆ. ಕೆಲವೊಮ್ಮೆ ಬೇರುಗಳು ಹೆಚ್ಚು ಆಳವಿಲ್ಲದ ನೀರಿನಲ್ಲಿ ಬೆಳೆಯಬಲ್ಲವು. ಇವುಗಳ ಸ್ವಾಭಾವಿಕ ನೆಲೆ ಮತ್ತು ದೇಹರಚನೆ ಭಿನ್ನವಾಗಿರುತ್ತದೆ. ಹೂಗೊಂಚಲುಗಳು ಹೆಚ್ಚಾಗಿ ತೇಲುತ್ತಿರುತ್ತವೆ. ಅಥವಾ ನೀರಿನ ಮಟ್ಟಕ್ಕಿಂತ ಮೇಲಕ್ಕೇರುತ್ತವೆ. ಯಟ್ರಿಕ್ಯುಲೇರಿಯ ಮೊದಲಾದ ಗಿಡಗಳು ಹೂಬಿಡುವ ಕಾಲದಲ್ಲಿ ನೀರಿನ ಮೇಲ್ಮಟ್ಟಕ್ಕೆ ಬಂದು ಅನಂತರ ತಳ ಭಾಗಕ್ಕೆ ಮುಳುಗುವುದುಂಟು. ಇವುಗಳಲ್ಲಿ ಐದು ವಿಧಗಳಿವೆ. 1. ತೇಲಾಡುವ ಜಲಸಸ್ಯಗಳು : ಇವು ನೀರಿನಲ್ಲಿ ತೇಲಾಡುವ ಇಲ್ಲವೆ ನೀರಿನೊಳಗಿದ್ದರೂ ಸ್ವಲ್ಪಭಾಗ ಹೊರ ವಾತಾವರಣದ ಸಂಪರ್ಕದಲ್ಲಿರುವ ಎಲ್ಲ ಸಸ್ಯಗಳನ್ನೂ ಒಳಗೊಂಡಿವೆ. ಆದರೆ ಇವು ಬೇರುಗಳಿಂದ ಆವರಿಸಲ್ಪಟ್ಟಿರುವುದಿಲ್ಲ. ಪಿಸ್ಟಿಯ, ಲೆಮ್ನ, ಐಕಾರ್ನಿಯ, ಸಾಲ್ವೀನಿಯ ಮೊದಲಾದವು ಈ ಗುಂಪಿಗೆ ಸೇರಿವೆ. 2. ತೊನೆದಾಡುತ್ತಿರುವ ಜಲಸಸ್ಯಗಳು : ಇವು ವಾತಾವರಣದ ಸಂಪರ್ಕದಲ್ಲಿಲ್ಲದಿದ್ದರೂ ನೀರಿನ ಮಟ್ಟಕ್ಕೆ ಸರಿಯಾಗಿ ಮುಳುಗುತ್ತವೆ. ಬಾಷ್ಪವಿಸರ್ಜನೆಯ ಅಗತ್ಯವಿಲ್ಲದಿದ್ದರೂ ಇವು ಗಾಳಿ ಬೆಳಕು ಸರಿಯಾಗಿ ದೊರೆಯುವ ನೀರಿನಲ್ಲಿ ಬೆಳೆಯುತ್ತವೆ. 3. ತಳಭಾಗಕ್ಕೆ ಬಂಧಿಸಲ್ಪಟ್ಟಿದ್ದರೂ ತೇಲಾಡುವ ಸಸ್ಯಗಳು : ಇವು ನೀರಿನ ಮೇಲೆ ತೇಲಾಡುತ್ತಿದ್ದರೂ ತಳಭಾಗದ ಕೆಸರು ಮಣ್ಣಿನಲ್ಲಿ ಬೇರು ಬಿಟ್ಟಿರುತ್ತವೆ. ಉದಾ : ತಾವರೆ, ಪೊಟಮೊಜೆಟಾನ್ ಮತ್ತು ನೆಪ್ಚೂನಿಯ. 4. ನೀರಿನಲ್ಲಿ ಪೂರ್ತಿ ಮುಳುಗಿ ಬೇರು ಬಿಟ್ಟಿರುವ ಜಲಸಸ್ಯಗಳು : ಈ ವಿಭಾಗಕ್ಕೆ ಸೇರಿದ ಜಲಸಸ್ಯಗಳ ಮುಖ್ಯ ಲಕ್ಷಣಗಳೆಂದರೆ ಅಂತರ ಗಿಣ್ಣುಗಳ ವ್ಯಾಪ್ತಿ, ಪ್ಯಾಲಿಸೇಡ್ ಪರೆಂಕಿಮದ ಕೊರತೆ ಮತ್ತು ಎಪಿಡರ್ಮಿಸ್‍ನಲ್ಲಿ ಕ್ಲೋರೋಫಿಲ್ ಇರುವಿಕೆ. ಉದಾ ; ವ್ಯಾಲಿಸ್ನೇರಿಯ, ಹೈಡ್ರಿಲ, ಮಿರಿಯೋಫಿಲಂ ಮತ್ತು ಯುಟ್ರಿಕ್ಯುಲೇರಿಯ. 5. ಬೇರು ಬಿಟ್ಟಿರುವ ಉಭಯವಾಸಿಗಳು : ಈ ಗುಂಪಿನ ಸಸ್ಯಗಳು ಹೆಚ್ಚು ಆಳವಿಲ್ಲದ ನೀರಿನಲ್ಲಿ ಬೆಳೆಯುತ್ತವೆ. ಗಿಡದ ತಳ ಭಾಗ ನೀರಿನಲ್ಲಿ ಅಥವಾ ಕೆಸರು ಮಣ್ಣಿನಲ್ಲಿಯೂ ಗಿಡದ ಮೇಲ್ಭಾಗ ನೀರಿನ ಮಟ್ಟಕ್ಕಿಂತ ಬಹಳ ಎತ್ತರದಲ್ಲಿಯೂ ಇರುತ್ತದೆ. ಇವಕ್ಕೆ ಹ್ಯಾಲೋಫೈಟ್ಸ್ ಎಂಬ ಹೆಸರೂ ಇವೆ. ಇವು ಜಲ ಹಾಗೂ ಭೂಮಿಯ ವಾತವರಣಗಳಿಗೆ ಹೊಂದಿಕೊಳ್ಳುವಂತೆ ರಚಿಸಲ್ಪಟ್ಟಿದೆ. ಜೌಗು ಪ್ರದೇಶಗಳಲ್ಲಿ ಬೆಳೆಯುವ ಸಸ್ಯಗಳಾದ ರೈeóÉೂೀಫೊರ, ಅವಿಸೆನಿಯ ಮೊದಲಾದವುಗಳಲ್ಲಿ ವಿಶೇಷ ರೀತಿಯ ಬೇರುಗಳು ಮಣ್ಣಿನಿಂದ ಮೇಲಕ್ಕೆ ಬೆಳೆಯುವುವು. ಇವಕ್ಕೆ ನ್ಯೂಮಟೋಫೋರ್ಸ್ ಎಂದು ಹೆಸರು. ಈ ಬೇರುಗಳಲ್ಲಿ ಆಕ್ಸಿಜನ್ ಸರಬರಾಜಿಗೆ ಅನುಕೂಲವಾಗುವಂತೆ ಸಣ್ಣ ಸಣ್ಣ ರಂದ್ರಗಳುಂಟು.

	ಅನೇಕ ಜಲಸಸ್ಯಗಳಲ್ಲಿ ಒಂದು ಬಗೆಯ ಸಹವಾಸವನ್ನು ಪ್ರದರ್ಶಿಸುತ್ತವೆ. ಉದಾಹರಣೆಗೆ ಐಕಾರ್ನಿಯ-ಪೊಟಮೊಜೆಟಾನ್, ಹೈಡ್ರಿಲ್ಲ-ವ್ಯಾಲಿಸ್ನೇರಿಯ, ಎರಿಯೋಕಾಲಾನ್-ಡ್ರಾಸಿರ ಮುಂತಾದವು ಒಟ್ಟೊಟ್ಟಿಗೆ ಒಂದೇ ಜಾಗದಲ್ಲಿ ಬೆಳೆಯುವುದು ಕಂಡುಬರುತ್ತದೆ.

	ಜಲಸಸ್ಯಗಳಲ್ಲಿ 25%-30% ಸ್ಥಳೀಯ(ಎಂಡೆಮಿಕ್) ಪ್ರಭೇದಗಳುಂಟು. ಪ್ರಾಯಶಃ ಅವು ಬೆಳೆಯುವ ಮಣ್ಣಿನ ಕೆಲವು ವಿಶೇಷ ಗುಣಗಳೇ ಇದಕ್ಕೆ ಕಾರಣವಿರಬಹುದು. ಉದಾಹರಣೆಗೆ ಕೆಲವು ಸ್ಥಳಿಕ ಜಲಸಸ್ಯಗಳಾದ ಪೋಡಾಸ್ಪಮೇಸೀ ಕುಟುಂಬದ ಗಿಡಗಳು ಹೆಚ್ಚಾಗಿ ಉಷ್ಣ ಪ್ರದೇಶಗಳಲ್ಲಿ ಮಾತ್ರ ಸೀಮಿತವಾಗಿವೆ. ಈ ಕುಟುಂಬಕ್ಕೆ ಸೇರಿದ ಎಲ್ಲ ಸಸ್ಯಗಳು ಬೇರು, ಕಾಂಡ ಇತ್ಯಾದಿ ಭಾಗಗಳಿಲ್ಲದ ಥ್ಯಾಲಾಯ್ಡ್ ರೀತಿಯ ರಚನೆಯನ್ನು ಪಡೆದಿವೆ. ಇವುಗಳು ನೀಳವಾಗಿದ್ದು ಅಥವಾ ಅಗಲವಾಗಿದ್ದು ನೀರಿನಲ್ಲಿ ತೇಲಾಡುತ್ತಿರುತ್ತವೆ. ಭಾರತ ಮತ್ತು ಶ್ರೀಲಂಕಾಗಳಲ್ಲಿ ಸ್ಥಳಿತ ಜಲಸಸ್ಯಗಳ ವ್ಯಾಪ್ತಿ ಅಧಿಕವಾಗಿರುವುದಕ್ಕೆ ಕಾರಣ ಅಲ್ಲಿನ ಉಷ್ಣವಲಯದ ಮಳೆಯ ಕಾಡುಗಳು ಮತ್ತು ಕರಾವಳಿಯ ತಗ್ಗುಪ್ರದೇಶಗಳು.
(ಎಸ್.ಡಿ.ಕೆ.)
ಪರಿಷ್ಕರಣೆ : ಹರೀಶ್ ಭಟ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ